ಶ್ರಾವಣ ಮಾಸ, ದಾಸಯ್ಯ, ಗೋವಿಂದಾ ಗೋವಿಂದಾ

ದಾಸಯ್ಯ ! ಶ್ರೀಹರಿ ದಾಸಯ್ಯ 

ಬಾಲ್ಯದಲ್ಲಿ ವರ್ಷ ಪೂರ್ತಿ ಪ್ರತಿ ಶಕ್ರವಾರ ಅಥವಾ ಶನಿವಾರ ಬರುತ್ತಿದ್ದ 'ದಾಸಯ್ಯ' ಹೆಚ್ಚು ಕಡಿಮೆ ಮನೆಯವರಿಗೆಲ್ಲಾ ಪರಿಚಿತರಾಗಿರುತ್ತಿದ್ದರು . ದಾಸಯ್ಯ ಬಂದು ಜಾಗಟೆ ಬಡಿದು , ಶಂಖ ಊದಿ ಬಾಯಲ್ಲಿ ಅದೇನೂ ಶ್ಲೋಕ ಹೇಳುತ್ತಿದ್ದರು . ಅದೇನು ಎನ್ನುವುದು ನೆನಪಿಗೆ ಬರುತ್ತಿಲ್ಲ . ಕೊನೆಯಲ್ಲಿ 'ಗೋವಿಂದ .. ಗೋವಿಂದ ಎನ್ನುವುದು ಮಾತ್ರ ಚನ್ನಾಗಿ ನೆನಪಿದೆ . ಹೀಗೆ ಬರುತ್ತಿದ್ದ  ದಾಸಯ್ಯನಿಗೆ ಅಕ್ಕಿ , ರಾಗಿ ಅಥವಾ ಇತರೆ ಧವಸ-ಧಾನ್ಯವನ್ನ ಜೋಳಿಗೆಗೆ ಹಾಕಲು ಅಜ್ಜಿ ಹೇಳುತ್ತಿದ್ದರು . ಅಜ್ಜಿಯ ಅಣತಿಯಂತೆ ದಾಸಯ್ಯನ ಜೋಳಿಗೆಗೆ ಧವಸ ಹಾಕಿದ ನಂತರ ಆತ ತನ್ನ ಜಾಗಟೆಯನ್ನ ನಮ್ಮ ತಲೆಯ ಮೇಲಿಟ್ಟು ' ಚನ್ನಾಗಿ ಬಾಳಿ ಮಕ್ಕಳ ' ಎಂದು ಹರುಸುತ್ತಿದ್ದ . 

ನಮ್ಮ  ಬದುಕುವ ರೀತಿ ಎಷ್ಟು ಚಂದವಾಗಿತ್ತು ಎನ್ನಿಸುತ್ತದೆ . ಮಕ್ಕಳಲ್ಲಿ ' ಕೊಡುವಿಕೆ ಮತ್ತು ಸಹಬಾಳ್ವೆಯ ' ಪಾಠವನ್ನ ಎಷ್ಟು ಚನ್ನಾಗಿ ರೊಡಿಸಿ ಕೊಳ್ಳುವ ಅವಕಾಶವಿತ್ತು ಅಲ್ಲವೇ?
ಆಗೆಲ್ಲಾ ಹೇಳಿಕೊಳ್ಳುವಷ್ಟು  ಹಣವಿರದಿದ್ದರೂ ಇದ್ದುದರಲ್ಲೇ ತೃಪ್ತಿಯಾಗಿ ಬಾಳುವ ಸಮಾಜವಿತ್ತು . ಮನೆಯ ಬಾಗಿಲಿಗೆ ದೇಹಿ ಎಂದು ಬಂದ ದಾಸಯ್ಯನ ಯಾರೂ ಬಯ್ದು ಕಳಿಸಿದ ಉದಾಹರಣೆ ಇರಲಿಲ್ಲ . ಏನೂ ಇಲ್ಲದಿದ್ದವರೂ ಕೂಡ ' ಐದು ಪೈಸೆ ' ನಾಣ್ಯವನ್ನ ದಾಸಯ್ಯನ ಜಾಗಟೆ ಮೇಲಿಟ್ಟಿದ್ದ ಕಂಡ ನೆನಪು ಇನ್ನೂ ಹಸಿರಾಗಿದೆ . 

ಇವತ್ತು  ಬೆಂಗಳೂರಿನ ಮಧ್ಯಮವರ್ಗದ ಮನೆಯ ಮುಂದೆ ಮಿನಿಮಮ್ ಎರಡು ಕಾರು ನಿಂತಿರುತ್ತವೆ . ಬಾಡಿಗೆ ಮನೆಯವರು ಕೂಡ ದ್ವಿಚಕ್ರದಿಂದ ಬಡ್ತಿ ಹೊಂದಿದ್ದಾರೆ . ಹಣವೇನೂ ನಮ್ಮ ಜನರ ಬಳಿ ಸಾಕಷ್ಟಿದೆ . ಆದರೆ ನಿಧಾನವಾಗಿ ನಮ್ಮ ಹಿಂದಿನ ಕೊಂಡಿಗಳನ್ನ ಕಳಚಿಕೊಂಡು ಪೂರ್ಣ ಪ್ರಮಾಣದ ಪಾಶ್ಚ್ಯಾತ್ಯ ರೀತಿಯ ಬದುಕನ್ನ ಅಪ್ಪಿಕೊಳ್ಳುವತ್ತ ಹೊರಟವೇನೋ ಅನ್ನಿಸುತ್ತದೆ . 

ದಾಸಯ್ಯ ಎನ್ನುವುದು ಮಾಯವಾಗುತ್ತಿರುವ ಜನಾಂಗ ಅಲ್ವಾ ? ಬಹಳ ಖುಷಿಯಾಯ್ತು ನಿಮ್ಮನ್ನ ನೋಡಿ ಒಂದು ಫೋಟೋ ತೆಗೆದು ಕೊಳ್ಳಲೇ ? ಎಂದು ಕೇಳಿದೆ . ಧಾರಾಳವಾಗಿ ತೆಗೆದುಕೊಳ್ಳಿಯಪ್ಪ ಎಂದರವರು . ಬೆಂಗಳೂರಿನಲ್ಲಿ ಮನೆ ಮುಂದೆ ಬಂದವರನ್ನೆಲ್ಲ ಅನುಮಾನದಿಂದ ನೋಡುತ್ತಾರೆ . ಅದು ಅವರ ತಪ್ಪಲ್ಲ ಬಿಡಿ ಸಮಾಜ , ಕಾಲ ಬದಲಾಗಿದೆ . ಕೆಲವರು ಬಯ್ಯುತ್ತಾರೆ ಕೆಲವರು ಹೀನಾಯವಾಗಿ ನಿಂದಿಸಿ ಕಳಿಸುತ್ತಾರೆ . ಆದರೆ ಅದಕ್ಕೆಲ್ಲಾ ಬೇಜಾರಿಲ್ಲ . ಕೆಲವರು ಕಟ್ಟಿದ ನಾಯಿ ಬಿಚ್ಚಿ ಬಿಡುತ್ತಾರೆ . ಇಂತಹ ಸಂಸ್ಕಾರವಂತರನ್ನ ಕಂಡರೆ ಮಾತ್ರ ಬೇಜಾರಾಗುತ್ತದೆ  ಎಂದರಾತ , ಮುಂದುವರೆದು ಅದಕ್ಕೆ ದಾಸಯ್ಯ ನ ಸಂಖ್ಯೆ ಇಲ್ಲವೆನ್ನುವಷ್ಟು ಗೌಣವಾಗಿದೆ . ಹಳ್ಳಿ  ಕಡೆ ಸ್ವಲ್ಪ ಪರವಾಗಿಲ್ಲ ಎಂದು ಮತ್ತೊಮ್ಮೆ ನಮಗೆ ಆಶೀರ್ವದಿಸುವ ರೀತಿಯಲ್ಲಿ ಕೈಯನ್ನ ಎತ್ತಿ ಹೊರಟರು . 

ಶ್ರಾವಣ ಶನಿವಾರ ಬಂತೆಂದರೆ ಅಜ್ಜಿ ನಮಗೂ ಹಣೆಯ ಮೇಲೆ ನಾಮ ಹಾಕಿ ಕೈಯಲ್ಲಿ ಒಂದು ದೊಡ್ಡ ಪಾತ್ರೆ ನೀಡಿ ಕಳಿಸುತ್ತಿದ್ದಳು . ಬೇಡುವುದರಿಂದ ಮನಸ್ಸಿನಲ್ಲಿ ಅಪ್ಪಿ ತಪ್ಪಿ 'ನಾನು' ಎನ್ನುವ ಅಹಂಭಾವ ವಿದ್ದರೆ ಅಳಿಯಲು ಎಂದಿರಬಹುದೇನೋ ಗೊತ್ತಿಲ್ಲ . ಆದರೆ ನಮ್ಮ ಆಚರಣೆಗಳು ಮಾತ್ರ ಅರ್ಥವಿಲ್ಲದವಲ್ಲ . ನಮ್ಮ ಅಜ್ಞಾನ ಎಲ್ಲವನ್ನೂ ಬಿಟ್ಟು ಬಿಟ್ಟೆವು . ಮೊದ ಮೊದಲಿಗೆ ಹತ್ತಾರು ಮನೆಗೆ ಹೋಗಿ ಬೇಡಿ ಬರುತ್ತಿದ್ದೆವು . ಚೂರು ಬುದ್ದಿ ತಿಳಿಯುತ್ತ ಬಂದಮೇಲೆ ನಾಚಿಕೆ ಆಗುತ್ತಿತ್ತು ಹೀಗಾಗಿ ಊರಿನಲ್ಲಿದ್ದ ನಮ್ಮ ಬಂಧುಗಳ ಮನೆಯಲ್ಲಿ ಮಾತ್ರ ಬೇಡಲು ಕಳಿಸುತ್ತಿದ್ದರು . ಆಮೇಲಾಮೇಲೆ ದೇವರ ಮನೆಯಲ್ಲಿ ದೇವರ ಸಮ್ಮುಖದಲ್ಲಿ ಬೇಡುತ್ತಿದ್ದೆವು . ಅಜ್ಜಿ ಅಥವಾ ಅಮ್ಮ ನಮ್ಮ ತಂಬಿಗೆಗೆ ಧವಸವನ್ನ ಹಾಕುತ್ತಿದ್ದರು ಕೊಡುವುದಕ್ಕೆ ಇರುವ ಮಹತ್ವ ಬೇಡುವುದಕ್ಕೆ ಇರುವುದರ ಮಹತ್ವ  ಸಾಧ್ಯವಾದಷ್ಟು  ಅನನ್ಯಳಿಗೆ  ಹೇಳಿದ್ದಾಯ್ತು . 

ಎರಡು ದಶಕದ ನಂತರ ಕಂಡ ದಾಸಯ್ಯ ಆತ್ಮಾವಲೋಕನಕ್ಕೆ ಹಚ್ಚಿ ಮಾಯವಾಗಿಬಿಟ್ಟರು .

ಓಂ ನಮೋ ಭಗವತೇ ವಾಸುದೇವಾಯ ।
"ಓಂ ಆಂ ಶ್ರೀಂ ಹ್ರೀಂ ಕಂ ಕೂರ್ಮಾಯ ನಮಃ"
ಶ್ರೀ ಲಕ್ಷ್ಮೀ ಗವಿರಂಗನಾಥ ಸ್ವಾಮಿ ಗವಿರಂಗಾಪುರ.
ಗೋವಿಂದಾ, ಗೋವಿಂದಾ

Comments

Popular posts from this blog

Bengaluru_ Devanga Sangha's Centenary Year

Exploring the Lives of Sri Devala Maharishi and Sri Devara Dasimayya: Differences and Similarities.

Basketball's Rise in Cubbonpet Bengaluru.